ಬೇಸಿಗೆ ರಜೆಯಲ್ಲಿ ಸ್ಮಿತಾ, ಅಜ್ಜಿ-ತಾತನ ಮನೆಗೆ ಬಂದಿದ್ದಳು.
ಅಜ್ಜಿಯ ತೋಟದಲ್ಲಿ ನಾನಾ ಬಗೆಯ ಗಿಡಗಳನ್ನು ಕಂಡಳು.
ಉದ್ದದ ಗಿಡಗಳು.
ಸಣ್ಣ ಗಿಡಗಳು.
ಹೂವಿನ ಗಿಡಗಳು.
ನೇರಳೆ ಎಲೆಗಳ ಗಿಡಗಳು.
ಸ್ಮಿತಾ
ಗಿಡಗಳನ್ನು ಆಶ್ಚರ್ಯದಿಂದ
ನೋಡುತ್ತಾ ನಿಂತಳು.
“ಗಿಡ
ಹೇಗೆ ಬೆಳೆಯುತ್ತೆ?” ಎಂದು
ಮನದಲ್ಲೇ ಯೋಚಿಸಿದಳು.
ಮರುದಿನ ತಿಂಡಿ ತಿಂದ ನಂತರ, “ಬಾ ಸ್ಮಿತಾ, ಬೀಜಗಳನ್ನು ನೆಡೋಣ", ಎಂದರು ಅಜ್ಜಿ.
“ಸರಿ, ಸರಿ," ಎಂದು ಕುಣಿಯುತ್ತ ಸ್ಮಿತಾ ಅಜ್ಜಿಯ ಹಿಂದೆ ಓಡಿದಳು.
ಅಜ್ಜಿ ಮತ್ತು ಸ್ಮಿತಾ ಮಣ್ಣಲ್ಲಿ ಚಿಕ್ಕ ಚಿಕ್ಕ ಗುಳಿಗಳನ್ನು ತೊಡಿದರು.
ಅಜ್ಜಿ
ಸ್ಮಿತಾಳ ಕೈಯಲ್ಲಿ ಕೊತ್ತಂಬರಿ
ಬೀಜಗಳನ್ನು ಇಟ್ಟು,
“ಒಂದೊಂದು
ಬೀಜವನ್ನು ಒಂದೊಂದು ಗುಳಿಯಲ್ಲಿ
ಇಡು,” ಎಂದರು.
ಸ್ಮಿತಾ ನಿಧಾನವಾಗಿ ಒಂದೊಂದೇ ಬೀಜವನ್ನು ಗುಳಿಗಳಲ್ಲಿ ಇಟ್ಟಳು.
ಅಜ್ಜಿ ಇನ್ನೂ ಸ್ವಲ್ಪ ಬೀಜಗಳನ್ನು ಕೊಟ್ಟು,
“ಇವು ಪಾಲಕ್ ಸೊಪ್ಪಿನ ಬೀಜಗಳು.
ಇವುಗಳನ್ನು ಉಳಿದ ಗುಳಿಗಳಲ್ಲಿ ಇಡು,” ಎಂದರು.
ಸ್ಮಿತಾ ಎಲ್ಲಾ ಬೀಜಗಳನ್ನು ಇಟ್ಟಮೇಲೆ,
“ಈಗ ಅವುಗಳ ಮೇಲೆ ನಿಧಾನವಾಗಿ ಮಣ್ಣು ಹಾಕು,” ಎಂದರು ಅಜ್ಜಿ.
ಸ್ಮಿತಾ ಚಿಕ್ಕ ಕೈಗಳಿಂದ ನಿಧಾನವಾಗಿ ಮಣ್ಣು ಹಾಕಿದಳು.
ಅಜ್ಜಿ ಚಿಕ್ಕ ನೀರು ಸಿಂಪಡಿಸುವ ಬಾಟಲಿ ಕೊಟ್ಟು
“ಸ್ವಲ್ಪ ನೀರು ಹಾಕು," ಎಂದರು.
ಪಸ್... ಪಸ್... ಪಸ್...
ಎಂದು ನೀರು ಸಿಂಪಡಿಸಿದಳು.
“ಈಗ ಏನು ಮಾಡಬೇಕು, ಅಜ್ಜಿ?” ಎಂದು ಕೇಳಿದಳು ಸ್ಮಿತಾ.
“ಈಗ ಬೀಜಗಳು ಮೊಳಕೆಯಾಗುವವರೆಗೆ ಕಾಯಬೇಕು ಕಂದಾ,"ಎಂದರು ಅಜ್ಜಿ.
ಮರುದಿನ ಸ್ಮಿತಾ
ಬೆಳಿಗ್ಗೆ,
ಮಧ್ಯಾಹ್ನ,
ಸಾಯಂಕಾಲ,
ಮತ್ತೆ ಮತ್ತೆ ಹೋಗಿ, ಚಿಕ್ಕ ಗಿಡಗಳು ಬಂದಿವೆಯಾ? ಎಂದು ನೋಡಿದಳು.
ಆದರೆ... ಗಿಡಗಳೇ ಇಲ್ಲ!!!
"ಅಜ್ಜಿ, ಬೀಜಗಳು ಇನ್ನೂ ಮಲಗಿವೆಯಾ?” ಎಂದು ಕೇಳಿದಳು.
“ಇರಬಹುದು, ಕಂದಾ", ಎಂದರು ಅಜ್ಜಿ.
ಮರುದಿನ ಬೆಳಿಗ್ಗೆ, ಸ್ಮಿತಾ ತೋಟಕ್ಕೆ ಹೋದಳು.
ಅಲ್ಲಿ ಪುಟ್ಟ ಪುಟ್ಟ ಮೊಳಕೆಗಳನ್ನು ಕಂಡಳು.
"ಅಜ್ಜಿ, ಅಜ್ಜಿ, ಬೇಗ ಬನ್ನಿ!" ಎಂದು ಕೂಗಿದಳು.
ಅಜ್ಜಿ ಬಂದು ಆ ಪುಟ್ಟ ಸಸಿಗಳನ್ನು ನೋಡಿ,
“ಸ್ಮಿತಾ, ಇವು ಪಾಲಕ್ ಸೊಪ್ಪಿನ ಸಸಿಗಳು,” ಎಂದರು.
ಸ್ಮಿತಾ, ಚಪ್ಪಾಳೆ ತಟ್ಟುತ್ತಾ ಖುಷಿಯಿಂದ ಕುಣಿದಳು.
ಆದರೆ ಎಲ್ಲ ಬೀಜಗಳು ಇನ್ನೂ ಮೊಳೆತಿರಲ್ಲಿಲ್ಲ.
“ಅಜ್ಜಿ, ಕೊತ್ತಂಬರಿ ಸೊಪ್ಪಿನ ಸಸಿಗಳು ಎಲ್ಲಿ?” ಎಂದು ಕೇಳಿದಳು.
“ಇನ್ನೂ ಇಲ್ಲ, ಕಂದಾ", ಎಂದರು ಅಜ್ಜಿ.
“ಅಜ್ಜಿ, ಇನ್ನು ಸ್ವಲ್ಪ ನೀರು ಹಾಕಿದರೆ, ಬೇಗ ಬೆಳೆಯುತ್ತಾ?” ಎಂದು ಕೇಳಿದಳು ಸ್ಮಿತಾ.
ಅಜ್ಜಿ ಮಣ್ಣನ್ನು ಮುಟ್ಟಿ,
“ಬೇಡ ಕಂದಾ. ಮಣ್ಣು ಇನ್ನೂ ತೇವವಾಗಿಯೇ ಇದೆ,” ಎಂದರು.
ಸ್ಮಿತಾ
ಮಣ್ಣನ್ನು ನೋಡುತ್ತಾ,
“ಕೊತ್ತಂಬರಿ
ಬೀಜಗಳೇ, ಬೇಗ
ಸಸಿಯಾಗಿ,” ಎಂದಳು.
ಪಾಲಕ್ ಸೊಪ್ಪು ದಿನದಿಂದ ದಿನಕ್ಕೆ ಬೆಳೆಯಿತು, ಆದರೆ…
“ಕೊತ್ತಂಬರಿ ಸಸಿಗಳು ಮಾತ್ರ ಬೆಳೆಯುತ್ತಿಲ್ಲ,” ಎಂದು ಸ್ಮಿತಾ ಸಿಡುಕಿದಳು.
ಅಜ್ಜಿ
ನಗುತ್ತಾ ಹೇಳಿದರು,
“ಸಸಿ
ಹೊರಗೆ ಬರುವ ಮೊದಲು, ಭೂಮಿಯೊಳಗೆ
ಬೇರು ಬಿಡುತ್ತದೆ.
ಸ್ಮಿತಾ
ಮಣ್ಣನ್ನು ನೋಡುತ್ತಾ,
“ಹೌದಾ?
ಮೊದಲು ಒಳಗೆ
ಬೆಳೆಯುತ್ತಾ?” ಎಂದು
ಕೇಳಿದಳು.
“ಹೌದು,” ಎಂದು ಅಜ್ಜಿ ತಲೆ ಆಡಿಸಿದರು.
ಅಜ್ಜಿ ಮುಂದುವರಿಸುತ್ತ, "ಸೂರ್ಯನ ಬೆಳಕು, ನೀರು, ಮತ್ತು ಮಣ್ಣು — ಇವೆಲ್ಲ ಬೀಜ ಬೆಳೆಯಲು ಸಹಾಯ ಮಾಡುತ್ತವೆ.
ಕೆಲವು ಬೀಜಗಳು ಬೇಗ ಸಸಿ ಆಗುತ್ತವೆ.
ಕೆಲವು ನಿಧಾನವಾಗಿ ಸಸಿ ಆಗುತ್ತವೆ.” ಎಂದರು.
ಕಾಯುವುದು ಸ್ಮಿತಾಗೆ ತುಂಬಾ ಕಷ್ಟವಾಗಿತ್ತು.
“ಇನ್ನು
ನನ್ನಿಂದ ಕಾಯೋಕೆ ಆಗಲ್ಲ!
ನಾನು
ಆಟ ಆಡೋಕೆ ಹೋಗುತ್ತೇನೆ,”
ಎಂದು ಹೇಳಿ
ಸ್ಮಿತಾ ಓಡಿದಳು.
ಮರುದಿನ ಬೆಳಿಗ್ಗೆ, ಒಂದು ಸಣ್ಣ ಆಶ್ಚರ್ಯ ಕಾದಿತ್ತು.
ಪುಟ್ಟ ಕೊತ್ತಂಬರಿ ಸಸಿಗಳು ಚಿಗುರಿದ್ದವು.
“ಅಜ್ಜಿ, ಅಜ್ಜಿ! ಕೊತ್ತಂಬರಿ ಸಸಿಗಳು ಬಂದಿವೆ", ಎಂದು ಕೂಗಿದಳು ಸ್ಮಿತಾ.
ಅಜ್ಜಿ ತಮ್ಮ ಕೈಗಳನ್ನು ಸೀರೆಗೆ ಒರೆಸಿಕೊಂಡು ಹೊರಗೆ ಬಂದರು.
“ಕೊನೆಗೂ ಬಂತು ಅಜ್ಜಿ", ಎಂದು ಸ್ಮಿತಾ ಖುಷಿಯಿಂದ ಕುಣಿದಳು.
ಸ್ಮಿತಾ ಕೊತ್ತಂಬರಿ ಸಸಿಗಳ ಬಳಿ ಕುಳಿತುಕೊಂಡು ಕೇಳಿದಳು,
“ಅಜ್ಜಿ, ಪಾಲಕ್ ಸೊಪ್ಪು ಬೇಗ ಬೆಳೆಯುತ್ತದೆ.
ಹಾಗಾದರೆ, ನಿಧಾನವಾಗಿ ಬೆಳೆಯುವ ಕೊತ್ತಂಬರಿ ಸೊಪ್ಪನ್ನು ಯಾಕೆ ನೆಟ್ಟಿದ್ದು?”
“ಇನ್ನೂ ಸ್ವಲ್ಪ ಬೆಳೆಯಲಿ.
ಆಮೇಲೆ ನಿನಗೆ ಅದರಿಂದ ರುಚಿಯಾದದ್ದು ಮಾಡಿ ಕೊಡುತ್ತೇನೆ
ಆಗ ನಿನಗೆ ಗೊತ್ತಾಗುತ್ತದೆ.” ಎಂದರು.
ಪ್ರತಿದಿನ ಸ್ಮಿತಾ ಗಿಡಗಳನ್ನು ನೋಡಿಕೊಳ್ಳುತ್ತಿದ್ದಳು.
ಮಣ್ಣು ಒಣಗಿದಾಗಲೆಲ್ಲಾ,
ಪಸ್....... ಪಸ್....... ಪಸ್.......
ಎಂದು ನೀರು ಸಿಂಪಡಿಸಿದಳು.
"ಪುಟಾಣಿ ಗಿಡಗಳೇ, ನಿಮ್ಮ ಅಕ್ಕ ನಿಮಗಾಗಿ ಇಲ್ಲೇ ಇದ್ದಾಳೆ.
ಚೆನ್ನಾಗಿ ಬೆಳೆಯಿರಿ", ಎಂದು ಪಿಸುಗುಡುತ್ತಾ ನಕ್ಕಳು.
ಸ್ವಲ್ಪ ದಿನಗಳು ಕಳೆದವು.
ಪಾಲಕ್ ಮತ್ತು ಕೊತ್ತಂಬರಿ ಸೊಪ್ಪು ಸೊಂಪಾಗಿ ಬೆಳೆದವು.
ಒಂದು ದಿನ ಬೆಳಿಗ್ಗೆ ಅಜ್ಜಿ ಬುಟ್ಟಿಯನ್ನು ಹಿಡಿದು,
"ಸ್ಮಿತಾ, ಬಾ. ಅಡುಗೆಗೆ ಸ್ವಲ್ಪ ಸೊಪ್ಪು ಕೀಳೋಣ" ಎಂದು ಕರೆದರು.
"ನಮ್ಮ ತೋಟದಿಂದನಾ, ಅಜ್ಜಿ?" ಎಂದು ಸ್ಮಿತಾ ಕೇಳಿದಳು.
“ಹೌದು" ಎಂದು ಅಜ್ಜಿ ತಲೆ ಆಡಿಸಿದರು.
ಅಜ್ಜಿ ನಿದಾನವಾಗಿ ಪಾಲಕ್ ಸೊಪ್ಪನ್ನು ಕಿತ್ತರು.
ಸ್ಮಿತಾ ನಿಧಾನವಾಗಿ ಕೊತ್ತಂಬರಿ ಸೊಪ್ಪನ್ನು ಕಿತ್ತಳು.
ಸೊಪ್ಪನ್ನು ಕೈಯಲ್ಲಿ ಹಿಡಿದು,
“ನಾವು ಬೆಳೆದ ಸೊಪ್ಪು.... ನಮ್ಮ ಅಡುಗೆಗೆ," ಎಂದಳು ಸ್ಮಿತಾ.
ಅಜ್ಜಿ ನಕ್ಕರು.
ಅಡುಗೆಮನೆಯಲ್ಲಿ ಅಜ್ಜಿ ಎಲೆಗಳನ್ನು ಚೆನ್ನಾಗಿ ತೊಳೆದರು.
ಪಾಲಕ್ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿ, ಚಪಾತಿ ಹಿಟ್ಟಿನಲ್ಲಿ ಕಲಸಿದರು.
ಚಟ್ನಿ ಮಾಡಲು ತೆಂಗಿನಕಾಯಿ, ಮೆಣಸಿನಕಾಯಿ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ರುಬ್ಬಿದರು.
ಅದಕ್ಕೆ ಸ್ವಲ್ಪ ನಿಂಬೆಹಣ್ಣು ಹಿಂಡಿದರು.
ಬಿಸಿ ಬಿಸಿಯಾದ ಪಾಲಕ್ ಚಪಾತಿ ಮತ್ತು ಚಟ್ನಿಯನ್ನು ತಟ್ಟೆಯಲ್ಲಿ ಹಾಕಿ ಸ್ಮಿತಾಳಿಗೆ ಕೊಟ್ಟರು.
ಸ್ಮಿತಾ ಮೊದಲಿಗೆ ಚಪಾತಿ ಮುರಿದು ತಿಂದಳು.
"ಮ್!”, ಎಂದು ತಲೆ ಆಡಿಸಿದಳು.
ಮತ್ತೊಂದು ತುಂಡನ್ನು ಮಾಡಿ, ಚಟ್ನಿಯಲ್ಲಿ ಅದ್ದಿ ತಿಂದಳು.
“ಅಜ್ಜಿ, ಕೊತ್ತಂಬರಿ ಸೊಪ್ಪು ಹಾಕಿದ ಚಟ್ನಿ ಸೂಪರ್", ಎಂದಳು.
ಅಜ್ಜಿ ನಕ್ಕರು.
"ಅಜ್ಜಿ, ನಾಳೆ ಮತ್ತೆ ಏನಾದರೂ ಬೆಳೆಯೋಣ" ಎಂದು ತೋಟದ ಕಡೆ ನೋಡುತ್ತಾ ಹೇಳಿದಳು ಸ್ಮಿತಾ.








Comments
Post a Comment